-by ಶ್ರೀಚರಾನಂದ (ಶ್ರೀ ಚಂದ್ರಶೇಖರ ರಾಜಾನಂದ )
ಜ್ಯೋತಿಷ್ಯದಲ್ಲಿ ಮಂಗಳನಿಗೆ 'ಸೇನಾಪತಿ' ಎಂಬ ಬಿರುದಿದೆ. ಜ್ಯೋತಿಷ್ಯವು ವೈದಿಕ ಕಾಲದಲ್ಲಿ ಬರೆದ ಗ್ರಂಥಗಳಾದ್ದರಿಂದ, ಅದರ ಕಾರಕತ್ವವನ್ನು ಈಗಿನ ದಿನಗಳಿಗೆ ಅನ್ವಯಿಸಿಕೊಳ್ಳಬೇಕು.
ಮಂಗಳನನ್ನು ನಾವು ಈಗಿನ ಆರ್ಮಿ, ಏರ್ ಫೋರ್ಸ್, ನೇವಿ ಸೈನ್ಯಕ್ಕೆ ಮತ್ತು ಅದರ ಸೈನ್ಯಾಧಿಕಾರಿಗಳಿಗೆ ಅನ್ವಯಿಸಬಹುದು. ಸೇನಾಧಿಪತಿಯು ಸ್ವಯಂ ಯೋಧನೂ ಸಹ ಆಗಿರುತ್ತಾನೆ. ಸೇನೆ ಹಾಗೂ ಸೇನಾಧಿಪತಿಯಲ್ಲಿರುವಂತಹ ಎಲ್ಲಾ ಗುಣ ಸ್ವಭಾವಗಳನ್ನು ಮಂಗಳನ ಕಾರಕತ್ವ ಎಂದು ಅರಿಯಬೇಕು. ಆಯುಧಗಳ ವಿಷಯವನ್ನು ಸಹ ಮಂಗಳನಿಂದ ಕಾಣುತ್ತೇವೆ. ಯುದ್ಧದ ಸ್ಥಳ, ಯುದ್ಧ ಮತ್ತು ಜಗಳಗಳಿಗೆ ಕಾರಕನೂ ಸಹ ಮಂಗಳನಾಗಿರುತ್ತಾನೆ. ಧೈರ್ಯ, ಸಾಹಸ, ವೀರ್ಯವನ್ನು ಸಹ ಮಂಗಳನಿಂದ ಕಾಣುತ್ತೇವೆ. ವಿಶೇಷ ವಸ್ತ್ರಗಳು ಹಾಗೂ ಸಮವಸ್ತ್ರಗಳ (Uniform) ವಿಷಯವೂ ಸಹ ಮಂಗಳನಿಂದ ತಿಳಿಯುತ್ತದೆ.
ಯುದ್ಧ, ಸೇನೆ, ಪೊಲೀಸ್, ಸೇನಾಪತಿ, ಗಾರ್ಡ್ಸ್ - ಪ್ರತಿಯೊಂದೂ ಮಂಗಳನ ಕಾರಕತ್ವವಾಗಿದೆ. ಅಥಾರಿಟಿ (Authority) ಇರುವ ಹಾಗೂ ವಿಶೇಷ ವಸ್ತ್ರಧಾರಿಗಳು ಯಾರಾಗಿರುತ್ತಾರೋ, ಅವರಲ್ಲೂ ಮಂಗಳನ ಕಾರಕತ್ವವಿರುತ್ತದೆ; ಅಂದರೆ ಮಂಗಳನ ಪ್ರಭಾವವಿರುತ್ತದೆ.
ಶತ್ರುವಿನ ಜೊತೆ ಸೇನೆ ಸಂಘರ್ಷಿಸುವಾಗ ಉಂಟಾಗುವ ವಾದ-ವಿವಾದ, ಹೊಡೆದಾಟ, ಜಗಳ, ಹೊಡೆಯುವುದು-ಬಡಿಯುವುದು ಮತ್ತು ಅನಾಹುತ - ಇವುಗಳೆಲ್ಲಕ್ಕೂ ಮಂಗಳನೇ ಕಾರಕನಾಗಿದ್ದಾನೆ. ಜಗಳ, ಹೊಡೆದಾಟ, ಕೋಪ, ರಕ್ತಪಾತ - ಈ ಎಲ್ಲದಕ್ಕೂ ಮಂಗಳ ಕಾರಕನಾಗಿದ್ದಾನೆ. ಶತ್ರುತ್ವಕ್ಕೂ ಮಂಗಳನೇ ಕಾರಕನು.
ಒಮ್ಮೆ ಹಿರಣ್ಯಾಕ್ಷನು ಭೂಮಿಯನ್ನು ಕದ್ದು ಅಪಹರಿಸಿ, ಅನಂತ ಸಾಗರದ ಆಳದಲ್ಲಿ ಅಡಗಿಸಿಟ್ಟನು. ಆಗ ಭಗವಂತನು ವರಾಹನಾಗಿ ಅವತರಿಸಿ, ಹಿರಣ್ಯಾಕ್ಷನನ್ನು ವಧಿಸಿ ಪೃಥ್ವಿಯನ್ನು (ಭೂಮಿಯನ್ನು) ಮುಕ್ತಿಗೊಳಿಸಿದನು. ಅನಂತರ ಪೃಥ್ವಿಯ ಆಸೆಗಾಗಿ ಭಗವಂತನು ಮನೋಹರ ರೂಪವನ್ನು ತಾಳಿದನು. ಇವರಿಬ್ಬರಿಂದ ಮಂಗಳನು ಜನಿಸಿದನು.
ಮಂಗಳನ ಶರೀರದಲ್ಲಿ ಕೆಂಪು ಲೋಹವಿದೆ, ಆತನು ಕೆಂಪು ವಸ್ತ್ರವನ್ನು ಧರಿಸಿ, ಕೆಂಪು ಮಾಲೆಯನ್ನು ಧರಿಸಿದ್ದಾನೆ. ಮಂಗಳನು ಪೃಥ್ವಿಯ ಮಗನಾದ್ದರಿಂದ ಭೂಮಿ ಮತ್ತು ಜಮೀನಿನ ಕಾರಕನೂ ಸಹ ಮಂಗಳನಾಗಿದ್ದಾನೆ. ಮಂಗಳನು ಕೆಂಪು ವಸ್ತ್ರವನ್ನು ಧರಿಸಿರುವ ಕಾರಣ, ಕೆಂಪು ಬಣ್ಣದ ಕಾರಕತ್ವವೂ ಸಹ ಮಂಗಳನದಾಗಿರುತ್ತದೆ.
ಮಂಗಳನು ಕಾರ್ತಿಕೇಯ ಹಾಗೂ ಹನುಮಂತನ ಭಕ್ತನಾಗಿದ್ದಾನೆ (ಅಥವಾ ಅವರ ಸ್ವರೂಪನಾಗಿದ್ದಾನೆ). ಆದುದರಿಂದ ಕಾರ್ತಿಕೇಯನ ಹಾಗೂ ಹನುಮಂತನ ಮಂದಿರದ ವಿಚಾರವನ್ನು ಮಂಗಳನಿಂದ ನೋಡುತ್ತೇವೆ. ಮಂಗಳದೇವನ ರತ್ನವು ಹವಳವಾಗಿದೆ. ಕೆಂಪು ಬಣ್ಣದ ಅನ್ನ ಮತ್ತು ಆಹಾರ ಪದಾರ್ಥಗಳ ಬಗ್ಗೆ ಮಂಗಳನು ಹೇಳುತ್ತಾನೆ. ಕೆಂಪು ಬಣ್ಣದ ಧಾನ್ಯಗಳು ಮಂಗಳನಿಗೆ ಸಂಬಂಧಿಸಿವೆ.
ರಾಶಿ ಕುಂಡಲಿಯಲ್ಲಿ ಮಂಗಳನು ಮೇಷ ಹಾಗೂ ವೃಶ್ಚಿಕ ರಾಶಿಯ ಸ್ವಾಮಿಯಾಗಿದ್ದಾನೆ. ಸೂರ್ಯ, ಚಂದ್ರ ಮತ್ತು ಗುರುಗಳು ಮಂಗಳನಿಗೆ ಮಿತ್ರರಾಗಿದ್ದಾರೆ. ಬುಧನನ್ನು ಮಂಗಳನು ಶತ್ರು ಎಂದು ಭಾವಿಸುತ್ತಾನೆ. ಶುಕ್ರ ಮತ್ತು ಶನಿಗಳನ್ನು ಮಂಗಳನು ಸಮನಾಗಿ (ಸಮ ಗ್ರಹಗಳಾಗಿ) ಕಾಣುತ್ತಾನೆ. ಮಂಗಳನಿಗೆ ಇರುವ ಏಕೈಕ ಶತ್ರು ಬುಧ.
ಮಂಗಳನಿಗೆ ಸಂಬಂಧಿಸಿದ ಕಾರಕತ್ವಗಳು ತುಂಬಾ ಇವೆ. ತಮ್ಮ ಮತ್ತು ತಂಗಿಯರ ವಿಚಾರವನ್ನು ಮಂಗಳನಿಂದ ನೋಡುತ್ತೇವೆ. ಕೈಗಳ ಕಾರಕನು ಮಂಗಳದೇವನಾಗಿದ್ದಾನೆ. ಯೋಧನ ಬಗ್ಗೆಯೂ ಸಹ ಮಂಗಳನು ಹೇಳುವುದರಿಂದ - ಯೋಧನಿಗಾಗಿ, ಸೈನ್ಯಕ್ಕಾಗಿ, ಯುದ್ಧ ಮಾಡುವುದಕ್ಕಾಗಿ ಹಾಗೂ ಬಲಪ್ರಯೋಗ ಮಾಡುವುದಕ್ಕಾಗಿ ಕೈಗಳ ಅವಶ್ಯಕತೆ ಇರುತ್ತದೆ.


Leave a Reply