-by ಶ್ರೀಚರಾನಂದ (ಶ್ರೀ ಚಂದ್ರಶೇಖರ ರಾಜಾನಂದ )
ಸರ್ವರಿಗೂ ನಮಸ್ಕಾರ ಈ ದಿನದ ಸಂಚಿಕೆಯಲ್ಲಿ ನಾವು ಚಂದ್ರನ ಕಾರಕತ್ವದ ಬಗ್ಗೆ ತಿಳಿಯೋಣ
ರಾಣಿಯನ್ನು ತಾಯಿಯ ಸ್ಥಾನಕ್ಕೆ ಹೋಲಿಸಲಾಗಿದೆ, ಆದುದರಿಂದ ತಾಯಿಯ ವಿಚಾರವನ್ನು ಚಂದ್ರನಿಂದ ತಿಳಿಯಲಾಗುತ್ತದೆ.
ಒಂದು ಪೌರಾಣಿಕ ಕಥೆಯಂತೆ, ಚಂದ್ರದೇವನು ಒಮ್ಮೆ ತನ್ನ ಸೌಂದರ್ಯದ ಮದದಿಂದ ಮತ್ತು ಮಾನಸಿಕ ಚಾಂಚಲ್ಯದ ಕಾರಣದಿಂದ ತನ್ನ ದೇವಗುರು ಬೃಹಸ್ಪತಿಗಳ ಪತ್ನಿಯಾದ ತಾರಾಳನ್ನು ಮೋಹಿಸಿದನು.
ದೇವಿ ತಾರೆ ಅತ್ಯಂತ ಪತಿವ್ರತೆ, ಸುಶೀಲೆ ಮತ್ತು ಧಾರ್ಮಿಕ ಸ್ತ್ರೀಯಾಗಿದ್ದಳು. ಆದುದರಿಂದ ಆಕೆಯನ್ನು ವರಿಸಲು ಸಾಧ್ಯವಾಗದಿದ್ದಾಗ ಚಂದ್ರನು ಒಂದು ಯೋಜನೆ ರೂಪಿಸಿದನು.
ತನ್ನ ಮಾಯಾಶಕ್ತಿಯಿಂದ ಬಲವಂತವಾಗಿ ಆಕೆಯನ್ನು ತನ್ನ ಜೊತೆ ಕರೆದೊಯ್ದನು. ಈ ಕೃತ್ಯದಿಂದ ಅವನಿಗೆ ಬಹಳ ಅಪಮಾನ ಉಂಟಾಯಿತು. ಚಂದ್ರನು ಈ ತಪ್ಪನ್ನು ಭಾದ್ರಪದ ಶುಕ್ಲ ಪಕ್ಷದ ಚತುರ್ಥಿಯ ದಿನದಂದು ಮಾಡಿದ್ದನು.
ಆದುದರಿಂದಲೇ ಭಾದ್ರಪದದ ಶುಕ್ಲ ಪಕ್ಷದ ಚತುರ್ಥಿಯಂದು ಚಂದ್ರನನ್ನು ನೋಡಿದಾಗ ಮನಸ್ಸಿನಲ್ಲಿ ಚಂಚಲ ಆಲೋಚನೆಗಳು ಬರುತ್ತವೆ ಎನ್ನಲಾಗುತ್ತದೆ. ಆನಂತರ ಇತರ ದೇವತೆಗಳು ಹಸ್ತಕ್ಷೇಪ ಮಾಡಿ, ಗುರು ಬೃಹಸ್ಪತಿಗೆ ಅವರ ಹೆಂಡತಿಯನ್ನು ಹಿಂದಿರುಗಿಸುವಂತೆ ಮಾಡಿದರು.
ಇದರಿಂದ ನಾವು ಚಂದ್ರನ ಕಾರಕತ್ವವನ್ನು ನೋಡಿದಾಗ ಮನಸ್ಸು, ಮನಸ್ಸಿನ ಸ್ಥಿತಿ, ಚಾಂಚಲ್ಯತೆ, ಛಲ ಮತ್ತು ಕಲಾತ್ಮಕತೆಯನ್ನು ಚಂದ್ರನಿಂದ ಗುರುತಿಸಬಹುದು.
ಮೇಲಿನ ಘಟನೆ ನಡೆದ ನಂತರ ಚಂದ್ರನಿಗೆ ಬಹಳ ಪಶ್ಚಾತಾಪ ಉಂಟಾಯಿತು. ಅನಂತರ ಅವನು ಭಗವಾನ್ ಶಂಕರ ಮತ್ತು ಬ್ರಹ್ಮನನ್ನು ಕುರಿತು ತಪಸ್ಸನ್ನು ಆಚರಿಸಿದನು. ಬ್ರಹ್ಮನು ತಪಸ್ಸಿಗೆ ಪ್ರಸನ್ನನಾಗಿ ಚಂದ್ರನ ಪಾಪಗಳನ್ನು ಸಮುದ್ರದಲ್ಲಿ ತೊಳೆದು, ಅವನನ್ನು ಪಾಪವಿಮುಕ್ತಗೊಳಿಸಿದನು.
ಚಂದ್ರನ ತಂದೆಯಾದ ಮಹರ್ಷಿ ಅತ್ರಿಯೂ ಆತನಿಗೆ ಶಕ್ತಿಯನ್ನು ಪ್ರದಾನ ಮಾಡಿದರು ಮತ್ತು ದೇವತೆಯ ರೂಪದಲ್ಲಿ ಪುನಃ ಆತನನ್ನು ಸ್ಥಾಪಿಸಲಾಯಿತು. ಈ ಕಥೆಯಿಂದಾಗಿ ನಾವು ಸಮುದ್ರ, ಸಮುದ್ರದ ಉತ್ಪನ್ನವಾದ ಮುತ್ತು, ಉಪ್ಪು ಮತ್ತು ಉಪ್ಪಿನ ರುಚಿಯನ್ನು ಚಂದ್ರನ ಕಾರಕತ್ವದಲ್ಲಿ ಕಾಣುತ್ತೇವೆ.
ಇನ್ನೊಂದು ಪೌರಾಣಿಕ ಕಥೆಯಂತೆ, ಚಂದ್ರನ ವಿವಾಹವು ದಕ್ಷಪ್ರಜಾಪತಿಯ 27 ಹೆಣ್ಣುಮಕ್ಕಳ ಜೊತೆ ನಡೆಯಿತು. ಈ 27 ಹೆಣ್ಣುಮಕ್ಕಳೇ ನಮ್ಮ ನಕ್ಷತ್ರಗಳು. ಎಲ್ಲರೂ ಸಹ ಪತಿವ್ರತೆಯರು, ಸುಶೀಲೆಯರು ಹಾಗೂ ತನ್ನ ಪತಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಆದರೆ ಚಂದ್ರನು ರೋಹಿಣಿ ನಕ್ಷತ್ರದಲ್ಲಿ ಮಾತ್ರ ಬಹಳ ಆಸಕ್ತಿ ಹೊಂದಿದ್ದನು. ಆಗ ಉಳಿದ 26 ಹೆಂಡತಿಯರು ದಕ್ಷನಲ್ಲಿ ದೂರು ನೀಡಿದಾಗ, ದಕ್ಷನು ಬಂದು ಚಂದ್ರನಿಗೆ ಕ್ಷಯಿಸುವಂತೆ ಶಾಪ ನೀಡಿದನು.
ಇದರಿಂದ ಚಂದ್ರನು ಬಹಳ ದುಃಖಿತನೂ, ವ್ಯಾಕುಲನೂ ಆದನು. ಇದರಿಂದ ಮುಕ್ತಿ ಪಡೆಯಲು ಆತನು ಶಂಕರನನ್ನು ಕುರಿತು ಘೋರ ತಪಸ್ಸನ್ನು ಆಚರಿಸಿದನು. ಶಂಕರನು ಪ್ರತ್ಯಕ್ಷನಾಗಿ, "ನನಗೆ ದಕ್ಷನ ಶಾಪವನ್ನು ಸಂಪೂರ್ಣವಾಗಿ ಪರಿಹರಿಸಲು ಸಾಧ್ಯವಿಲ್ಲ; ಬದಲಾಗಿ ಒಂದು ಆಶೀರ್ವಾದ ನೀಡುತ್ತೇನೆ. ಅದೇನೆಂದರೆ, ಯಾವ ದಿನ ನಿನ್ನ ದೇಹವು ಕ್ಷಯಿಸುತ್ತದೆಯೋ, ಪುನಃ ಅದು ಮುಂದಿನ ದಿನಗಳಲ್ಲಿ ಪುಷ್ಟಿ (ವೃದ್ಧಿ) ಪಡೆಯುತ್ತದೆ" ಎಂದನು.
ಈ ಪ್ರಕ್ರಿಯೆಯ ಚಕ್ರವು ನಿರಂತರವಾಗಿದ್ದು, ಅದು ಎರಡು ಪಕ್ಷಗಳನ್ನು ಉಂಟುಮಾಡುತ್ತದೆ: ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷ. ಕೃಷ್ಣ ಪಕ್ಷದಲ್ಲಿ ಚಂದ್ರನು ಕ್ಷಯಿಸುತ್ತಾನೆ ಮತ್ತು ಶುಕ್ಲ ಪಕ್ಷದಲ್ಲಿ ಚಂದ್ರನು ಪುಷ್ಟಿಗೊಳ್ಳುತ್ತಾನೆ.
ಅಷ್ಟೇ ಅಲ್ಲದೆ, ಚಂದ್ರನು ತನ್ನ ತಪ್ಪನ್ನರಿತು ಪ್ರತಿ ಪತ್ನಿಗೂ ಪ್ರತ್ಯೇಕವಾಗಿ ಸಮಯ ನೀಡುತ್ತೇನೆಂದು ಒಪ್ಪಿಕೊಂಡನು. ಆದುದರಿಂದಲೇ ಚಂದ್ರನು ಪ್ರತಿದಿನ ಒಂದೊಂದು ನಕ್ಷತ್ರದೊಂದಿಗೆ ಸಂಚರಿಸುತ್ತಾನೆ.
ಈ ಕಥೆಯಲ್ಲಿ ಚಂದ್ರನು ಕ್ಷಯದ ಶಾಪಕ್ಕೆ ಒಳಗಾಗಿದ್ದರಿಂದ, ನಾವು ಚಂದ್ರನಿಂದ ಟಿ.ಬಿ ಕಾಯಿಲೆ (Tuberculosis) ಮತ್ತು ಕ್ಷಯರೋಗವನ್ನು ನೋಡುತ್ತೇವೆ.
ಚಂದ್ರನು ಪಾರ್ವತಿ ದೇವಿಯ ಉಪಾಸಕನಾಗಿದ್ದಾನೆ, ಆದ್ದರಿಂದ ಪಾರ್ವತಿ ದೇವಿಯ ಮಂದಿರದ ವಿಚಾರಗಳನ್ನು ನಾವು ಚಂದ್ರನಿಂದ ತಿಳಿಯಬಹುದು.
ಕಾಲಪುರುಷನ ಕುಂಡಲಿಯಲ್ಲಿ ಚಂದ್ರನು ಕರ್ಕಾಟಕ ರಾಶಿಯ ಅಧಿಪತಿಯಾಗಿದ್ದಾನೆ. ಕರ್ಕಾಟಕವು ರಾಶಿಚಕ್ರದ 4ನೇ ರಾಶಿಯಾಗಿದೆ.
ಈ ನಾಲ್ಕನೇ ಭಾವದಿಂದ ನಾವು ಸುಖದ ವಿಚಾರವನ್ನು ನೋಡುತ್ತೇವೆ.
ತಾಯಿಯ ವಿಚಾರವನ್ನು ಸಹ ನಾವು ನಾಲ್ಕನೇ ಭಾವದಿಂದಲೇ ನೋಡುತ್ತೇವೆ.
ಅಲ್ಲದೆ ದಯೆ ಹಾಗೂ ಕರುಣೆಯ ವಿಚಾರವನ್ನು ಸಹ ನಾವು ಚಂದ್ರನಿಂದಲೇ ತಿಳಿಯಬಹುದು.
ಚಂದ್ರನು ಸೂರ್ಯ ಮತ್ತು ಬುಧರನ್ನು ತನ್ನ ಮಿತ್ರರೆಂದು ಭಾವಿಸುತ್ತಾನೆ.
ಚಂದ್ರನು ಸೂರ್ಯ ಮತ್ತು ಬುಧರನ್ನು ತನ್ನ ಮಿತ್ರರೆಂದು ಭಾವಿಸುತ್ತಾನೆ.
ರಾಹು ಕೇತುಗಳು ಚಂದ್ರನ ಶತ್ರುಗಳೇ ಆಗಿದ್ದಾರೆ ರಾಹು ಕೇತುಗಳನ್ನು ಬಿಟ್ಟರೆ ಯಾವುದೇ ಗ್ರಹದ ಜೊತೆ ಚಂದ್ರನು ದ್ವೇಷ ಮಾಡುವುದಿಲ್ಲ
ಬಿಳಿಯ ಬಣ್ಣ, ಸುಗಂಧಿತ ಹೂವುಗಳು ಮತ್ತು ಎದೆಯ ಭಾಗದ ಕಾರಕತ್ವವನ್ನು ಚಂದ್ರನಲ್ಲಿ ಕಾಣುತ್ತೇವೆ.
ಹಾಲು, ಹಾಲಿಗೆ ಸಂಬಂಧಿಸಿದ ವಸ್ತುಗಳು ಮತ್ತು ಸಮುದ್ರಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಚಂದ್ರನೇ ಸೂಚಿಸುತ್ತಾನೆ.


ನಿಮ್ಮದೊಂದು ಉತ್ತರ